ಕೇಳನೋ ಹರಿ ತಾಳನೊ – ಸಂಗೀತ ದಿನದ ಇತಿಹಾಸ, ಮಹತ್ವ

ಸಂಗೀತ… ಬಹುಶಃ ಸಂಗೀತವನ್ನು ಇಷ್ಟಪಡದ ವ್ಯಕ್ತಿಗಳು ಇಲ್ಲವೇ ಎನ್ನಬಹುದು. ನಮ್ಮ ಖುಷಿ, ದುಃಖ, ಒಂಟಿತನದಲ್ಲಿ ಜೊತೆಯಾಗುವುದು ಸಂಗೀತ. ಸ್ನೇಹಿತರ ಜೊತೆ ನಲಿದಾಡುವಾಗಲೂ ಜೊತೆಯಾಗುವುದು ಸಂಗೀತ. ಪ್ರಯಾಣ ಮಾಡುವಾಗ, ಮನೆಗೆಲಸ ಮಾಡುವುದು ಹಿನ್ನೆಲೆಯಲ್ಲಿ ಸಂಗೀತದ ಆಲಾಪ ಕೇಳುತ್ತಿದ್ದರೆ ಅದರ ಒಲವೇ ಬೇರೆ. ಹೀಗೆ ಸಂಗೀತ ನಮ್ಮೆಲ್ಲರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಇದು ನಮ್ಮನ್ನು ಸಂಭ್ರಮಿಸುವಂತೆ ಮಾಡುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ, ಮನಸ್ಸಿಗೆ ಸಂತೋಷ ಸಿಗುವಂತೆ ಮಾಡುತ್ತದೆ. ಸಂಗೀತವು ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಯಾವುದೇ ಕಲಾ ಪ್ರಕಾರದಂತೆ ಸಂಗೀತವು ಭಾಷೆಯ ಅಡೆತಡೆಗಳನ್ನು ಮೀರಿದ್ದು, ಸಂಗೀತದ ಲಯವೇ ಹಾಗೆ ಎಂತಹವರನ್ನೂ ಸೆಳೆಯುವ ಗುಣ ಇದಕ್ಕಿದೆ.

ವಿಶ್ವ ಸಂಗೀತ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. 1982ರಲ್ಲಿ ಫ್ರಾನ್ಸ್‌ನಲ್ಲಿ “ಫೆಟೆ ಡೆ ಲಾ ಮ್ಯೂಸಿಕ್” ಎಂಬ ಕಾರ್ಯಕ್ರಮದಿಂದ ಈ ಉತ್ಸವದ ಆರಂಭವಾಯಿತು. ಫ್ರೆಂಚ್ ಕಲಾ ಮತ್ತು ಸಂಸ್ಕೃತಿ ಸಚಿವ ಜ್ಯಾಕ್ ಲ್ಯಾಂಗ್ ಮತ್ತು ಸಂಗೀತ ನಿರ್ದೇಶಕ ಜೋಯಲ್ ಕೊಹೆನ್ ಈ ದಿನದ ಆಚರಣೆಗೆ ಬುನಾದಿಯಾಗಿದ್ದಾರೆ. ಈ ದಿನದ ಉದ್ದೇಶವಂತೂ, ಸಂಗೀತವನ್ನು ಪ್ರಚಾರಗೊಳ್ಳಿಸುವುದು ಮತ್ತು ಎಲ್ಲರಿಗೂ ಅದರ ಸೌಂದರ್ಯವನ್ನು ತಲುಪಿಸುವುದು.

ವಿಶ್ವ ಸಂಗೀತ ದಿನದ ಪ್ರಾಮುಖ್ಯತೆ ಅದೆಂದರೆ, ಅದು ಸಂಗೀತವನ್ನು ಯುವ ಪೀಳಿಗೆಗೆ ಹೆಚ್ಚು ಆಕರ್ಷಕವಾಗಿಸುವ ಪ್ರಯತ್ನ ಮಾಡುತ್ತದೆ. ಈ ದಿನದಂದು ಹಲವಾರು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಸಂಗೀತ ಪ್ರದರ್ಶನಗಳು ನಡೆಯುತ್ತವೆ. ಎಲ್ಲಾ ರೀತಿಯ ಸಂಗೀತ ಪ್ರಕಾರಗಳನ್ನೂ ಒಳಗೊಂಡ ಈ ಆಚರಣೆ, ವಿಶೇಷವಾಗಿ ಯುವಕರು ಮತ್ತು ಸಂಗೀತ ಪ್ರೇಮಿಗಳಿಗೆ ಪ್ರೇರಣೆಯಾಗಿದೆ

ಸಂಗೀತವು ಎಲ್ಲಾ ಕಾಲಗಳಲ್ಲಿ ನಮ್ಮ ಜೊತೆಯಲ್ಲಿರುವ ಸಂಗಾತಿಯಾಗಿದ್ದು, ಸಂತೋಷದ ಕ್ಷಣಗಳನ್ನು ಮತ್ತು ಕಷ್ಟದ ಸಮಯವನ್ನು ಸಮಾನವಾಗಿ ಹಂಚುತ್ತದೆ. ಈ ದಿನದಂದು ಪ್ರಪಂಚದಾದ್ಯಂತ ಹಲವಾರು ಕಚೇರಿಗಳು, ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ, ಇದು ಸಂಗೀತ ಪ್ರೇಮಿಗಳಿಗೆ ಒಂದು ಮಹತ್ವದ ದಿನವಾಗಿದೆ

ವಿಶ್ವ ಸಂಗೀತ ದಿನದ ವಿಶೇಷ

ವಿಶ್ವ ಸಂಗೀತ ದಿನದ ವಿಶೇಷ ಜಗತ್ತಿನಾದ್ಯಂತ ವಿಶ್ವ ಸಂಗೀತ ದಿನಕ್ಕಾಗಿಯೇ ಸಂಗೀತಗಾರರು, ಉತ್ಸಾಹಿ ಸಂಗೀತ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ. ಜಗತ್ತಿನ ಪ್ರಮುಖ ನಗರಗಳಲ್ಲಿರುವ ಬೀದಿಗಳು, ಬಸ್ ನಿಲ್ದಾಣಗಳು, ವಸ್ತುಸಂಗ್ರಹಾಲಯಗಳು, ಉದ್ಯಾನವನಗಳು, ಮಂಟಪಗಳಲ್ಲಿ ಸಂಗೀತ ಪ್ರದರ್ಶನಗಳನ್ನು ನೀಡುವುದು ಮನಸಿಗೆ ಮುದ ನೀಡುತ್ತದೆ. ಯುವ ಸಂಗೀತಗಾರರಲ್ಲಿ ಹೊಸ ಚೈತನ್ಯ ತುಂಬಿದಂತೆ ಆಗುತ್ತದೆ. ಇದರ ಜೊತೆಗೆ ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಗೀತ ಪ್ರಿಯರಿಗೆ ಅದು ಮನರಂಜನೆ ನೀಡಿದರೆ, ಸಂಗೀತಗಾರರ ಪಾಲಿಗೆ ಹೊಸ ಪ್ರೇರೇಪಣೆ ಸಿಕ್ಕಂತೆ ಆಗುತ್ತದೆ. ಭಾರತ ಸರ್ಕಾರವು ಸಹ ಈ ನಿಟ್ಟಿನಲ್ಲಿ ಸಂಗೀತದ ಮೂಲಕವೇ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕೆ ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ.

ಆಚರಣೆ ಹೇಗೆ?

ಸಂಗೀತಗಾರರು ಮತ್ತು ಗಾಯಕರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಪ್ರೇಕ್ಷಕರಿಗೆ ಸಂಗೀತ ಪ್ರದರ್ಶನ ನೀಡುವ ಮೂಲಕ ಸಂಗೀತಕ್ಕೆ ಗೌರವ ಸಲ್ಲಿಸಿ ಆ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಜೊತೆಗೆ ಹಬ್ಬದ ರೀತಿಯಲ್ಲಿ ಪ್ರಪಂಚದಾದ್ಯಂತ ಸಂಗೀತ ಕಚೇರಿಗಳು, ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Related Articles